ಹೋಗಿ ಬಾ ಮಗಳೇ !!

ಶುಕ್ರವಾರದ ಮದ್ಯಾಹ್ನ!! ಆತುರಾತುರವಾಗಿ ಎಲ್ಲ ಕೆಲಸಗಳನ್ನು ಮುಗಿಸಿ, ಪರದೇಶದಲ್ಲಿರುವ ಬಾಸ್ ಎಂದು ಕರೆಸಿಕೊಂಡು ಕುಳಿತಿರುವ ಕಲ್ಲು ಹೃದಯದ , ಮಾನವನಂತೆ ಕಾಣುವ ಮೃಗಕ್ಕೆ ಇಮೇಲ್ ಮಾಡಿ - ಇವತ್ತಿನ ಕಾರ್ಯಗಳಿಗೆ ಇತಿ ಶ್ರೀ ಹಾಡಿ, ಕನಸಿನ ಮೂಟೆಗಳನ್ನು ಹೊತ್ತು, ಒಂಬತ್ತು  ದಿನದ ರಜೆಯ ಗುಂಗಿನಲ್ಲೇ ತೇಲುತ್ತ  ಆಫೀಸ್ ನಿಂದ ಕಾಲ್ಕಿತ್ತಾಗ ಸೂರ್ಯ ನೆತ್ತಿಯ ಮೇಲಿದ್ದ !!! ಮನೆಗೆ ಬಂದು ಕೈಗೆ ಸಿಕ್ಕಿದ್ದನ್ನು ಬ್ಯಾಗ್ ಒಳಕೆ ತುರುಕಿಸಿ ಪ್ಯಾಕಿಂಗ್ ಮುಗಿಸಿದೆ ! ಹಾ! ಅಂದ ಹಾಗೆ ಅದು ಬರಿ ನನ್ನ ಸರಂಜಾಮುಗಳ ಪ್ಯಾಕಿಂಗ್ !! ಅದಕ್ಕೆ ಈಗ ಆದ್ಯತೆ ತುಂಬಾ ಕಡಿಮೆ !! ಇನ್ನು ನನ್ನ ಮಗುವಿನ ಸಾಮಾನು ತುಂಬಲು ಒಂದು ದೊಡ್ಡ ಬ್ಯಾಗ್ ತೆಗೆದು, ಅದರೊಳೆಗೆ ಬೇಕಾದ ವಸ್ತುಗಳನ್ನು ತುಂಬಿಸಿದಾಗ ನನ್ನ ಶಾಲೆಯ ದಿನಗಳ ಜ್ಞಾಪಕವಾಗಿತ್ತು !! ಅಮ್ಮ ಕೂಡ ನನ್ನನ್ನು ವಸತಿ ಶಾಲೆಗೆ ಕಳುಹಿಸುವಾಗ ಟ್ರಂಕ್ ನಲ್ಲಿ ಹೀಗೆ  ಜೊಡಿಸುತ್ತಿದ್ದಳು , ಆದರೆ ಅದು ತುಂಬಾ ಒಪ್ಪವಾಗಿರುತ್ತಿತ್ತು .  ಒಂದು ಹಾರಿಕೆಯ ನಗುವೊಂದಿಗೆ ಕೆಲಸ ಮುಂದುವರಿಸಿದ್ದೆ ! ಮಗುವಿಗೆ ಬೇರೆ ಅಂಗಿ ತೊಡಿಸಿ , ತುಂಬಿರುವ ಬ್ಯಾಗ್ ಗಳನ್ನೆಲ್ಲ ಕಾರ್ ಡಿಕ್ಕಿ ಒಳಗೆ ಸೇರಿಸಿದಾಗ ಕಿರು ಬೆರಳಿನಲ್ಲಿ ಬೆಟ್ಟ ಎತ್ತು ಬಿಸಾಕಿದ ಅನುಭವ !!

ಬೆಂಗಳೂರು ಬಿಟ್ಟು, ಹೈವೇ ಯ ಖಾಲಿಯಾಗಿರುವ ರಸ್ತೆಯ ಮೇಲೆ ಕಾರ್ ಒಡುತ್ತಿರುವಂತೆ, ನನ್ನ ಕೂಸಿಗೆ ನಿದ್ರೆ ಆವರಿಸಿತ್ತು!
ತವರೂರಿಗೆ ಹೋಗುವ ಸಿರಿಯೇನೆಂದು ಹೇಳಲು ಪದ ಸಮೂಹಗಳಿಲ್ಲ !! ಮದ್ಯ ಮದ್ಯ ಅಪ್ಪ ಅಮ್ಮನ ಕರೆಗಳು.. "ಕತ್ತಲಾಗೋ ಮುಂಚೆ ಮನೆಗೆ ಬನ್ನಿ" , "ಆನೆಗಳು ದಾರಿಯಲ್ಲಿ ಅಡ್ಡಗಟ್ಟಾವು" ಎಂಬ ಎಚ್ಚರಿಕೆಯ ಮಾತುಗಳು.. ಅವರಿಗೂ ನಮ್ಮ ಮೇಲಿನ ಕಾಳಜಿ, ನಮಗಾದರೂ ಬೇಗ ಮನೆ ಸೇರುವ ತವಕ.. ಎಲ್ಲಿಯೂ ನಿಲ್ಲಿಸದೇ ಪಯಣ ಸಾಗಿತ್ತು !! ಮಲೆನಾಡಿನ ಗಾಳಿಯೇ ಹಾಗೆನೋ... ಊರಿಗೆ ತಲುಪಲು ಹತ್ತಿರವಾದಂತೆಲ್ಲಾ , ಮನಸ್ಸಿಗೆ ಎನೋ ಸಮಾಧಾನ!
ಆಗಾಗ ಮೊಬೈಲ್ ನಲ್ಲಿ ಇಮೇಲ್ ಗಳನ್ನು ನೋಡಿ, ಕೆಲವೊಂದಕ್ಕೆ ಪ್ರತ್ಯುತ್ತರ ರವಾನಿಸಿ ಅದನ್ನು ಅನಾಥವಾಗಿ ಹಿಂಬದಿಯ ಸೀಟ್ ಮೇಲೆ ಬಿಸಾಕಿದೆ, ಅದರೊಂದಿಗಿದ್ದ ಒತ್ತಡವನ್ನೂ ಕೂಡ.... ಮೈನ್ ರೋಡ್ ಇಂದ  ಊರಕಡೆಗೆ ಚಕ್ರ ತಿರುಗಿದಾಗ, ಕಾಲಚಕ್ರ ಒಮ್ಮೆ ಹಿಂದೆ ತಿರುಗಿದಂತಹ  ಅನುಭವ! ಹತ್ತಿರದಲ್ಲಿ ಒಂದೂ ಮನೆಗಳಿರಲಿಲ್ಲ, ಆದರೀಗ ಹೂವಣ್ಣನ ಮನೆ ಕೆಲಸ ಶುರುವಾಗಿದೆ !! ಧರ್ಮಣ್ಣನೂ-ನಾನು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಅದೇ ಹಾದಿಯಲ್ಲಿ ಮನೆ ಮಾಡುತ್ತಿದ್ದಾನೆ.. ದಟ್ಟವಾದ ತೋಟ ಈಗ ಬಟಾಬಯಲಾಗಿದೆ ! ಸಲ್ಪ ಮುಂದೆ ಈರಪ್ಪಣ್ಣ ನ ಹೆಸರು ಆತನ ಮನೆಯ ಗೇಟ್ ನ ಮೇಲೆ , ಮಹಿಳಾ ಸಬಲೀಕರಣವೆಂಬಂತೆ ಜೊತೆಗೆ ಆತನ ಹೆಂಡತಿಯ ಹೆಸರು ಕೂಡ !!! ಹಾಗೆ ಇಳಿಜಾರಿಗೆ ಬಂದರೆ ಬಲ ಬದಿ ಮೂಲೆಯ  ನೀರಿನ ಟ್ಯಾಂಕ್.. ಎಷ್ಟು ಜಗಳಗಳಿಗೆ ಮೂಕ ಸಾಕ್ಷಿಯಾಗಿದೆಯೋ ತಿಳಿಯದು !! ಹಾಗೆ ಎಡ ತಿರುವಿದರೆ, ಕುಟ್ಟಿ ಮನೆ, ದಾಟಿದರೆ , ತಮ್ಮಯ್ಯನ ಹೊಸ ಸೂರು , ಮಬ್ಬುಗತ್ತಲಲ್ಲಿ ಮಂದವಾಗಿ ಕಾಣುವ ಆತನ ಮನೆ ಮುಂದಿನ ಬಲ್ಬ್ !!ಮತ್ತೆ ಎಡ ತಿರುವಿದರೆ ಮನೆಯ ಗೇಟ್ , ಅದರ ಮುಂದೆ ದಾಸ್ ನಮಗಾಗಿ ಕಾದು ಕುಳಿತಿದ್ದಾನೆ!!  ದಾಸ್ ಎಂಬುದು ನಮ್ಮ ಮನೆಯ ನಾಯಿ , ಮಗುವಿಗೆ ಕರೆಯಲು ಸುಲಭವಾಗಿರಲಿ ಎಂದು ಅಪ್ಪ ಮಾಡಿದ ನಾಮಕರಣ!!

ಮನೆಯ ಸುತ್ತ ಒಂದು ಪ್ರದಕ್ಷಿಣೆ ಹಾಕಿ , ಏನು ಬದಲಾಗಿದೆ ಎಂದು ಅಳೆದು ಲೆಕ್ಕ ಹಾಕಿ , ಕೈ ಕಾಲು ತೊಳೆಯದೆ  ಒಲೆಯ ಮುಂದೆ ಕುಳಿತು ಕಾಫೀ ಕುಡಿಯುವುದೇ ಒಂದು ಮಜಾ!! ಹಾಗೆ ಸಲ್ಪ ಹರಟಿ , ಹೊಟ್ಟೆಗೆ ಸಲ್ಪ ಸೇರಿಸಿ ಮತ್ತೆ ಮೊಬೈಲ್ ನೋಡಿ ಏನು ಇಮೇಲ್ ಇಲ್ಲ ಎಂದು ಖಾತ್ರಿ ಮಾಡಿ, ಮುಂದೆ ಹಿಂದೆ ಓಡಾಡಿ ಸುಸ್ತಾದಾಗ ಹೊರಬಂದೆ!  ಹೊರಗೆ ಬಂದು ಹಾಗೆ ಕಣ್ಣಾಡಿಸಿದರೆ ಮಂಜಿನಲ್ಲಿ ಮಿಂದು ಮಂದವಾಗಿ ಉರಿಯುತ್ತಿರುವ ದಾರಿ ದೀಪ, ಚಳಿಯಲ್ಲಿ ಹಂಚಿನ ಕೆಳಗೆ ಗೋಣಿಯ ಹಾಸಿನ ಮೇಲೆ ಮುದುಡಿ ಮಲಗಿರುವ ನಾಯಿ, ತೆಂಗಿನ ಗರಿಯಿಂದ ಜಾರಿ ಬೀಳುವ ಮಂಜು !! ಮನೆಗಳು ಇರುವಲ್ಲಿ ಕಾಣುವ ದೀಪಗಳ ಬೆಳಕು!! ಹಾಗೆ ಮುಂದೆ ನಡೆಯುತ್ತಾ ಸಾಗಿದರೆ ಒಣ ಹಾಕಿ ಗುಡ್ಡೆ ಮಾಡಿರುವ ಕಾಫಿ ರಾಶಿ, ಅದರ ಮೇಲೆ ಹೊದಿಸಿರುವ ಪ್ಲಾಸ್ಟಿಕ್ ನ ಚೀಲದ ಮೇಲೂ ಮಂಜಿನ ಹನಿಗಳು!! ಆ ಚಳಿಯ ಕುಳಿರ್ಗಾಳಿಗೆ ನಡುಗಿ ಒಳಗೆ ಓಡೋಡಿಬಂದೆ. ಮತ್ತೆ ಒಲೆ ಮುಂದೆ ಕೂರುವ ಸರದಿ !! ಮಲೆನಾಡಿನ ಚಳಿ ಮಳೆಗೆ ಒಲೆಯೊಂದೇ ಬೆಚ್ಚಗಿನ ಸಂಗಾತಿ !! ಬಿಸಿ ಬಿಸಿ ಊಟ ಮಾಡಿ , ತಲೆ ತುಂಬ ಹೊದ್ದು ಮಲಗಿದ್ದರೆ ಬೆಳಕಾಗುವ ಲಕ್ಷಣಗಳೇ ಇರುವುದಿಲ್ಲ!! ನನ್ನೊಂದಿಗೂ ಹೀಗೆ ಆಗಿತ್ತು..

ಅಮ್ಮ ಕಾಫಿ ತಂದ ಮೇಲೆ ಎದ್ದು ಮತ್ತೆ ಒಲೆ ಮುಂದೆ ಕಾಫಿ ಹೀರುವ ಕಾರ್ಯಕ್ರಮ!! ಒಲೆಯನ್ನು ದಿಟ್ಟಿಸಿ ನೋಡುತ್ತಾ ಬೆಚ್ಚಗೆ ಕುಳಿತಿರುವಾಗ  ಮಡಿಕೇರಿಯ ಚಳಿ ಕಣ್ಣ ಮುಂದೆ ಬಂದಂತಾಯ್ತು! ಅಪ್ಪ ನನ್ನನ್ನು ಶಾಲೆಗೆ ಬಿಡಲು ಹೊರಡುವಾಗಲೂ ಹೀಗೆ ಚಳಿ !! ನನ್ನೊಬ್ಬಳನ್ನೆ ಅಲ್ಲಿ ಬಿಟ್ಟು , ಇಲ್ಲಿದ್ದು ಚೆನ್ನಾಗಿ ಓದಬೇಕು ಮಗಳೇ ! ಎಂದು ಭಾರವಾದ ಮನಸ್ಸಿದ್ದರೂ ತೋರದೆ ಹೊರಡುತ್ತಿದ್ದರು !! ಹಾಗೆಯೇ ಕಾಫಿ ಕುಡಿದು ಒಲೆಯ ಮೇಲಿನ ಕಡುಬಿನ ಪಾತ್ರೆಯಿಂದ ಇಳಿಯುವ ನೀರು ನೊಡಿ , ನನ್ನನ್ನು ಶಾಲೆಗೆ ಬಿಟ್ಟು ಅಪ್ಪ ಹೋದ ಮೇಲೆ, ನನ್ನ ಕಣ್ಣಲ್ಲೂ ಹೀಗೆ ನೀರು ಸುರಿಯುವುದು ನೆನಪಾಗಿತ್ತು!! ಹಂಡೆಯ ಬಿಸಿ ನೀರು ನನಗಾಗೆ ಕಾದಂತಿತ್ತು !! ಚಳಿಗಾಲದ ಕೊರೆಯುವ ಚಳಿಯಲ್ಲೂ ಒಂದಿಷ್ಟು ಬಿಸಿ ನೀರು ಸಿಗದೇ ತಣ್ಣೀರಲ್ಲೆ ಸ್ನಾನ ಮಾಡಿದ ದಿನ ನೆನೆದು ಮೈ ಜುಮ್ ಎಂದಿತ್ತು!! ಆಗಿಂದ ಇಲ್ಲಿಯವರೆಗೂ ಮಕ್ಕಳು ಮನೆಗೆ ಬರುತ್ತಾರೆಂದರೆ ತರತರದ ಅಡುಗೆ ಸಿದ್ದ ಮಾಡಿ ಬಡಿಸುವುದೇ ಅಮ್ಮನ ಕೆಲಸ!! ನಮಗೇ ಎಲ್ಲದರಲ್ಲೂ ಆದ್ಯತೆ !!

ಮದ್ಯಾಹ್ನ ಆಗುತ್ತಿದ್ದಂತೆಯೇ ಅಜ್ಜಿಯ ಆಗಮನ!! ಅಪರೂಪದ ಅಜ್ಜಿಯ ಜೊತೆ ನಾವೆಲ್ಲಾ ಫೋಟೋ ತೆಗೆದಿದ್ದೆ ತೆಗೆದಿದ್ದು!
ಫೋನ್ ನಲ್ಲೂ ಕ್ಯಾಮೆರಾ ನೋಡಿ ಅಜ್ಜಿಗೆ ಆಶ್ಚರ್ಯ! ಫೋಟೋ ಹೇಗಿದೆ ಎಂದು ನೋಡುವುದೇ ಒಂದು ಖುಷಿ ಅದಕ್ಕೆ!!
ನಮ್ಮ ಕಾಲದಲ್ಲಿ ಫೋಟೋ ತೆಗೆಸುವುದಕ್ಕೆ  ಜಾತ್ರೆಗೆ  ಕಾಯಬೇಕಿತ್ತು , ಫೋಟೋ ಹೇಗಿದೆ ಎಂದು ನೋಡಲು ಇನ್ನೆರಡು ತಿಂಗಳು!! ಹಾಗೆಯೇ ಫೋಟೋ ತೆಗೆಯುತ್ತಿರುವಂತೆ ಒಂದು ಇಮೇಲ್ ಬಂತು!! ಸರಸರನೆ ಹೋಗಿ ಮ್ಯಾನೇಜರ್ ಗೆ ಕಾಲ್ ಮಾಡಿ ಬೇಕಾಗಿದ್ದ ವಿಷಯ ತಿಳಿಸಿ ಬಂದೆ!! ಇದನ್ನೆಲ್ಲಾ ಅಜ್ಜಿಗೆ ಬಿಡಿಸಿ ಬಿಡಿಸಿ ಹೇಳಬೇಕು !! ಇಮೇಲ್ ಅಂದ್ರೆ ಏನು ಅದು ಹೇಗೆ ಬಂತು , ಅದು ಟೆಲಿಗ್ರಾಂ ಗೆ ಸಮಾನವಾದುದ!! ಹೀಗೆ ಮಾತು ಮುಂದುವರೆಸುತ್ತಿದ್ದಂತೆ, whatsapp ಮೂಲಕ ನನ್ನ ಗೆಳತಿ ಫೋಟೋ ರವಾನಿಸಿದಳು, ಆಗಲೂ ಅಜ್ಜಿಗೆ ಕಾತರ !! ಎಲ್ಲವನ್ನೂ ಇಷ್ಟುದ್ದ ಇರುವ ಮೊಬೈಲ್ ನಲ್ಲೆ ಮಾಡುತ್ತೀರಾ?? ದಿನದಲ್ಲಿ ಇದನ್ನು ಕೈಲಿ ಹಿಡಿದುಕೊಂಡೆ ಇರಬೇಕು.. ನಿನ್ನ ಮಗುವನ್ನು ಎತ್ತುಕೊಳ್ಳುವುದಕ್ಕಿಂತ ಜಾಸ್ತಿ ಯಾವಾಗಲೂ ಇದನ್ನೇ ಎತ್ತಿರುತ್ತೀಯ!!! ಇದನ್ನು ಕೇಳಿದಾಕ್ಷಣ ನನ್ನ ಅಂತರಾತ್ಮದ ಗಂಟೆ ಬಾರಿಸಿತು !! ನನ್ನ ಮನಸ್ಸಿಗೆ ದೊಡ್ಡದಾದ ಅನಿರೀಕ್ಷಿತ ಪೆಟ್ಟು ಬಿತ್ತು !! ಅಷ್ಟೆಲ್ಲ ಕೊಚ್ಚಿಕೊಂಡ ವಸ್ತುವಿನ ಮೋಹವನ್ನು ಅಜ್ಜಿ ಹೀಗೂ ಹೇಳಬಲ್ಲಳು ಎಂಬ ಅರಿವು ಇರಲಿಲ್ಲ..  ನನ್ನ ಮೊಬೈಲ್  ಹುಚ್ಚು  ಸಲ್ಪ ಜಾಸ್ತಿಯೇ ಎಂದು ನನ್ನ ಅಜ್ಜಿಯ ಮುಕೇನ ತಿಳಿದುಕೊಳ್ಳಬೇಕಾಯ್ತು !!

ಹಾಗೆ ಸುಮ್ಮನೆ ಅಜ್ಜಿಯ ಮಾತುಗಳನ್ನೇ ನೆನೆಸಿಕೊಂಡು ಅಂಗಳದಲ್ಲಿ ಓಡಾಡುತ್ತಿದ್ದೆ. ಮಗುವು ಅದರ ತಾತನ ಜೊತೆ ದಾಸ್ ನೊಂದಿಗೆ ಆಡುತ್ತಿತ್ತು ! ಹಾಗೆಯೇ  ಮನಸು ಬೇರೆಡೆಗೆ ಎಳೆಯುತ್ತಿತ್ತು !! ಕಾಲೇಜ್ ಗೆ ಸೇರುವ ಸಮಯ! ಯಾವ ವಿಷಯ ಆರಿಸುವುದು, ಯಾವುದನ್ನು ಬಿಡುವುದು! ತುಂಬ ಗೊಂದಲ!! ಒಂದು ವಿಷಯ ಆರಿಸಿ ಒಂದು ತಿಂಗಳು ಹೋಗಿ ಸರಿಯಾಗಿಲ್ಲ ಎಂದು ಮತ್ತೊಂದಕ್ಕೆ ಸೇರಿಯಾಗಿತ್ತು !! ನಿನಗೇನೂ ಸರಿ ಎನ್ನಿಸುವುದೋ ಅದನ್ನು ಮಾಡು , ಹೋಗಿ ಬಾ ಮಗಳೇ !! ನಿನಗೆ ಎನಿಷ್ಟವೋ ಅದನ್ನೇ ಮಾಡು, ನಮಗೆ ನಿನ್ನ ನಿರ್ಧಾರ ಸರಿ  ಕಾಣದಿದ್ದರೆ ನಿನಗೆ ತಿಳಿ ಹೇಳುತ್ತೇವೆ ಎಂಬ ದೈರ್ಯದ ಮಾತು ಕೂಡ ಹೇಳಿದ್ದರು.   ಈಗ ನಾನು ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತೇನೆ  ಎಂದರೆ ಅದಕ್ಕೆ  ಅವರ ಆ ದೈರ್ಯದ ನುಡಿಗಳೇ ಸ್ಪೂರ್ತಿ !! ನಾನು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ನನ್ನ ಪೋಷಕರ ಸಹಕಾರ ಸದಾ ಇತ್ತು !! ಹೆಣ್ಣು ಮಗಳೆಂಬ ತಾರತಮ್ಯ ಇದುವರೆಗೂ ಅವರ ಕಣ್ಣಲ್ಲಿ ನಾನು ಕಂಡಿಲ್ಲ. ಅದು ಎಲ್ಲರು ಸರಕಾರೀ ಕೆಲಸಕ್ಕೆ ಸೇರುವ ಜಾಯಮಾನ. ನನಗೆ ಯಾವುದೋ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಎಂದು ಎಲ್ಲರ ಬಾಯಲ್ಲೂ ಹಗುರಾಗಿ ಹಾರಾಡುತ್ತಿದ್ದ ಆ ಮಾತುಗಳಿಗೆ ಸೊಪ್ಪು ಹಾಕಲು ಅವರ ಆ ಸಾಂತ್ವನ್ನದ ನುಡಿಗಳೇ ಸಾಕ್ಷಿ !!

ಸಂಜೆಯಾಗುತ್ತಿದ್ದಂತೆ ನನ್ನ ಅಜ್ಜಿ ವಾಪಸ್ ಮಾವನ ಮನೆಗೆ ಹೊರಡಲು ಸಿದ್ದವಾದಂತಿದ್ದಳು.. ಅವಳ ಮಾತುಗಳೇ ಹಾಗೆ ನಿಧಾನವಾಗಿ , ಯಾರಿಗೂ ನೋವಾಗದಂತೆ , ಹೇಳುವುದನ್ನು ಏನಾದರೂ ಕಥೆಯ ರೂಪದಲ್ಲಿ ಹೇಳಿ ಅರ್ಥ ಮಾಡಿಸುತ್ತಾಳೆ. ಹಾಗೆಯೇ ನನ್ನ ಪಕ್ಕ ಜಗುಲಿಯ ಮೇಲೆ ಅವಳ ಕೋಲನ್ನೂರಿ ಜಗುಲಿಯ ಮೇಲೆ ಕುಳಿತಳು. ಮಗಳೇ, ಮೊದಲೆಲ್ಲ ಹೆಂಗಸರು ಅಡುಗೆ ಮನೆಯಲ್ಲೇ ಇರಬೇಕಿತ್ತು , ಆದರೆ ಈಗ ಹಾಗಿಲ್ಲ!! ನೀವೇನು ಮಾಡುಲು ಇಷ್ಟವಿದೆಯೋ ಅದನ್ನು ಮಾಡಬಹುದು. ಕಲಿಯಲು ಸಾಕಷ್ಟಿದೆ. ಏನೇ ಮಾಡಿದರೂ ಕಾಗೆ ಕೆಂಬೂತವಾಗುವುದೇ!! ಹಾಗೆಯೇ , ಎಷ್ಟೇ ಸ್ವತಂತ್ರವಿದ್ದರೂ, ಒಂದು ಪರಿಧಿ ಎಂಬುದು ಇರಬೇಕು!! ಏನೇ ಮಾಡಿದರೂ ಹದ್ದು ಮೀರುವಂತಿರಬಾರದು!! ಎಷ್ಟೇ ಮೇಲೇರಿದರೂ, ಎಷ್ಟೇ ಹೆಚ್ಚು ಹಣ ಗಳಿಸಿದರೂ , ಬಾಡಿಗೆ ತಾಯಿಯನ್ನೇನು ಪಡೆಯಬಹುದು ಆದರೆ ಬಾಡಿಗೆ ತಾಯ್ತನವನ್ನು ಯಾರೂ ಅಂಗಡಿಯಲ್ಲಿಟ್ಟು ಮಾರುವುದಿಲ್ಲ. ಮಗುವಿಗೆ ಸಾಧ್ಯವಾದಷ್ಟು ಹೆಚ್ಚು ಸಮಯ ಕೊಡು ಎಂದಳು. ಅವಳಿಗೂ ನಾನು ಊರಿಗೆ ಬಂದಿರುವ ಉದ್ದೇಶ ಗೊತ್ತಿದ್ದಿರಬೇಕು!! ಅವಳ ಮಾತು ಹಾಗೆ ಮುಂದುವರೆಯಿತು. "ನನಗೆ ಗೊತ್ತು , ನೀನು ಮಗುವನ್ನು ಊರಲ್ಲಿ ಬಿಟ್ಟು ಹೋಗಲು ಬಂದಿದ್ದಿ ಅಂತ. ನಮಗೆ ಗೊತ್ತಿಲ್ಲದಿರೋರಿಗೆ ಹತ್ತು ರೂಪಾಯಿ ದುಡ್ಡು ಕೊಡದ ನಾವು , ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಮಗುವನ್ನು ಯಾರೋ ಗೊತ್ತಿಲ್ಲದಿರುವರ ಕೈಗೆ ಹಾಕುವುದೇಕೆ?? ನೀನು ಈ ಮಟ್ಟಕ್ಕೆ ತಲುಪುವಂತೆ ಬುದ್ದಿ ಕಲಿಸಿರುವ ಅಪ್ಪ ಅಮ್ಮ , ನಿನ್ನ ಮಗುವಿಗೂ ಕೂಡ ಸಂಸ್ಕಾರ ಧಾರೆ ಎರೆಯುತ್ತಾರೆ !! ಎಂದಳು". ಅಷ್ಟು ಹೇಳಿ ಹಾಗೆ ಕೋಲೂರುತ ಮೇಲಕ್ಕೆದ್ದಳು. ಅಜ್ಜಿಗೆ ಇತ್ತೀಚಿಗೆ ಬೇರೆಯವರ ಮನೆಗಳಲ್ಲಿ ಉಳಿಯುವುದು ಕಡಿಮೆ. ಅಷ್ಟು ದೂರವೇನು ಇಲ್ಲವಾದುದರಿಂದ ಅವಳು ಮಾವನೊಂದಿಗೆ ಹೊರಡಲು ಹಾಗೆ ಗೇಟ್ ಕಡೆ ಹೆಜ್ಜೆ ಇರಿಸಿ, ಕಾರ್ ಏರಿದ್ದಳು .

ಅವಳು ಹೇಳಿದ ಮಾತುಗಳು, ಮನಸಿನಲ್ಲೇ ಮೂರು ನಾಲ್ಕು ಬಾರಿಯಾದರೂ ತೇಲಿ ಬಂದಿದ್ದವು. ಹೌದು!! ಬೆಂಗಳೂರಿನಲ್ಲಿ ಗಂಡ ಹೆಂಡತಿ ದುಡಿಯುವುದಾದರೆ , ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರಾದರೊಬ್ಬರು ಇರಲೇ ಬೇಕು .  ಒಬ್ಬರ ದುಡಿಮೆ ಎಲ್ಲೆಲ್ಲಿಗೂ ಸಾಲದು. ಮಗುವನ್ನು ಡೇ ಕೇರ್ ಗೆ ಸೇರಿಸುವು ಎಂದು ಸಜ್ಜಾಗಿದ್ದ ನಾವು , ಡೇ ಕೇರ್ ಗಳ ದಿನಚರಿ ಕಂಡು ದಂಗಾಗಿದ್ದೆವು. ಮಗು ಇಷ್ಟ ಪಟ್ಟಾಗ ಮಲಗುವ ಅವಕಾಶವಿಲ್ಲ.. ಮಗುವಿನ ದಿನಚರಿ ನಮ್ಮ ದಿನಚರಿ ಗೆ ಅಳವಡಿಕೆಯಾಗಬೇಕು. ಮಗುವನ್ನು ಡೇ ಕೇರ್ ಗೆ ಅಡ್ಜಸ್ಟ್ ಮಾಡಿಸಲು ಮೂರು ವಾರಗಳವರೆಗಾದರೂ  ಯಾರದೊಬ್ಬರು ಪೋಷಕರು ಮಗುವಿನೊಂದಿಗೆ ಡೇ ಕೇರ್ ನಲ್ಲಿ ಇರಬೇಕು. ಊಟವನ್ನು ನಾವೇ ಮನೆಯಿಂದ ಕೊಟ್ಟು ಕಳುಹಿಸಿದರೂ , ಮೀಲ್ಸ್ ಚಾರ್ಜ್ ಮಾಡಬೇಕು ಏಕೆಂದರೆ , ಮಕ್ಕಳು ಬೇರೆ ಮಕ್ಕಳು ಬೇರೆ ಏನನ್ನಾದರೂ ತಿನ್ನುವುದನ್ನು ನೋಡಿ ಬೇಕೆಂದರೆ ಅದನ್ನೂ ತಿನ್ನಿಸಬೇಕು. ಮನೆಯಿಂದ ಪಿಕ್ ಅಪ್ , ಡ್ರಾಪ್ ಅಂತ ಇನ್ನೇನಾದರೂ ವ್ಯವಸ್ತೆ ಬೇಕಿದ್ದರೆ , ಅದಕ್ಕೂ ತಿಂಗಳಿಗಿಷ್ಟರಂತೆ ತೆತ್ತಬೇಕು. ಹೋಗಲಿ! ಹಣದ ವಿಚಾರ ಹಾಗಾಗಲಿ, ಮಗು ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರರವರೆಗೆ ಅಲ್ಲಿರಬೇಕು. ನಾವು ಕರೆದುಕೊಂಡು ಬರಲು ಅರ್ಧ ಗಂಟೆ ತಡೆಯಾದರೂ ಅದಕ್ಕೆ ಬೇರೆ ಫೈನ್. ಆ ಮಗು ಬೆಳಿಗ್ಗೆ ಎಳರವರೆಗೆ ಮಲಗಿದ್ದರೆ ಅದನ್ನು ಬಲವಂತವಾಗಿ ಎಬ್ಬಿಸಿ ಅದನ್ನು ಡೇ ಕೇರ್ ಗೆ ಸಿದ್ದಪಡಿಸಬೇಕು. ಅದು ಮತ್ತೆ ಸುಮಾರು ಹತ್ತು ಗಂಟೆಗೆ ಮತ್ತೆ ಮಲಗುವಂತಿದ್ದರೆ ಅದಕ್ಕೆ ಅವಕಾಶವಿಲ್ಲ. ಇನ್ನೂ ಎರಡು ವರುಷ ತುಂಬದ ಆ ಕಂದಮ್ಮಗೆ ಇಷ್ಟೆಲ್ಲಾ ಕಷ್ಟ ತರವೇ ?? ಮೂರು ವರ್ಷ ದಿಂದ  ಇಪ್ಪತ್ತಮೂರು ವರ್ಷದ ವರೆಗೆ ಅದಕ್ಕೆ ಸ್ಕೂಲ್ ಕಾಲೇಜ್ ಇದ್ದುದೇ. ಈಗಲಿಂದಲೇ ಅದನ್ನು ಕೋಣೆಯಲ್ಲಿ ಕಟ್ಟಿ ಹಾಕುವುದು ಎಷ್ಟು ಸರಿ.

 ಹೌದು! ನನ್ನೊಳಗಿನ ತಾಯಿಗೆ ಆಗುತ್ತಿರುವ ಸಂಕಟ ಯಾರಿಂದಲೂ ಅಳೆಯಲಾಗದು. ನನ್ನ ಹೃದಯವನ್ನು ಕಿತ್ತು ಬೇರೆಡೆಗೆ ಇಟ್ಟು ಹೊರಡುತ್ತಿರುವ ಅನುಭವ. ನನ್ನ ಮಗುವನ್ನು ನನ್ನ ಅಪ್ಪ ಅಮ್ಮ ಳಿಗಿಂತ ಚೆನ್ನಾಗಿ ನೋಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ . ಅಕ್ಕ ಪಕ್ಕದ ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ ತಮ್ಮ , ಅವರ ಮಕ್ಕಳು ಅಲ್ಲೇ ಇರುವುದರಿಂದ ಆ ಮಗುವಿಗೂ ಬೇರೆಯವರೊಂದಿಗೆ ಹೊಂದಿಕೊಳ್ಳುವ ವಾತಾವರಣ . ಮಲೆನಾಡಿನ ಗಾಳಿ , ಮನೆಯ ಹಸುವಿನ ಹಾಲು ಹಾಗು ಅಮ್ಮನ ಕೈಯಾರೆ ತಯಾರಾದ ತುಪ್ಪ . ಆದರೂ ಮೊದಲ ಬಾರಿಗೆ ಮಗುವನ್ನು ಬಿಟ್ಟು ಹೋಗುವುದು ಸಹಿಸಲಾರದ ನೋವು . ನನ್ನ ಪೋಷಕರಿಗೆ ಅದರ ಅರಿವಾಗಿತ್ತು . ಅಪ್ಪ ಅಮ್ಮ ನನ್ನನ್ನು ರೂಂ ಗೆ ಕರೆದು ಬಿಡಿಸಿ ಹೇಳಿದರು . ಮಗುವಿನ ಒಳಿತನ್ನು ಚಿಂತೆ ಮಾಡುವುದಕ್ಕೆ ಅಣಿಯಾಗಿದ್ದರು. ನನಗೆ ಎಲ್ಲ ಸಮಯದಲ್ಲೂ ಧೈರ್ಯ ತುಂಬುವ ನನ್ನ ಪೋಷಕರು , ಈಗಲೂ ಸಹ ನನಗೆ ಹೇಳಿದ್ದು ಇದೇ , "ಹೋಗಿ ಬಾ ಮಗಳೇ " . ನಿನಗಿಂತಲೂ ಚೆನ್ನಾಗಿ ನಾವು ಮಗುವನ್ನು ನೋಡಿಕೊಳ್ಳುತ್ತೇವೆ ಎಂಬ ಭರವಸೆ. ಅವರು ಬೇರಾದರೆ ನಾನು ಬರಿ ಕಾಂಡ , ಅದರಲ್ಲಿರುವ ಹೂವು ನನ್ನ ಮಗು. ಕಾಂಡ ನಿಂತಿರುವುದು ಬೇರಿನ ಸಹಾಯದಿಂದ ಹಾಗು ಹೂವಿನ ಆರೈಕೆಯಿಂದ. ನನಗೆ ನನ್ನ ತೀರ್ಮಾನದಿಂದ ನನಗೆ ನೋವಾದರೂ , ನನ್ನ ಮಗು ಜಗತ್ತಿನ ಅತಿ ಒಳ್ಳೆಯ ತೋಳುಗಳಲ್ಲಿದೆ ಎನ್ನುವ ಸಮಾಧಾನ!! ಭಾವನೆಗಳನ್ನೆಲ್ಲಾ  ವಾರದ ಕೊನೆಗೆ ಮೂಟೆಕಟ್ಟಿ , ಶುಕ್ರವಾರ ರಾತ್ರಿಯಿಂದ ಭಾನುವಾರ ರಾತ್ರಿಯವರೆಗೆ ಮಗುವೊಂದಿಗೆ ಭಾವನಾ ಲೋಕದಲ್ಲಿ ವಿಹರಿಸುತ್ತಾ , ಭಾನುವಾರ ರಾತ್ರಿ ಅಲ್ಲಿಂದ ಕಾಲ್ಕೀಳುವ ಮುನ್ನ ಹೊಟ್ಟೆ ಕಿವುಚುವ ದುಃಖ , ಹಾಗು ಆಣೆಕಟ್ಟು ಕಟ್ಟಲಾರದ ಅಶ್ರುಧಾರೆ!! ಸಮಯದೊಂದಿಗೆ ಪಯಣ , ಈಜಿ ದಡ ಸೇರುವ ಕಾತರ , ಸಾಧಿಸುವ ಛಲ  ಜೊತೆಗೊಂದಿಷ್ಟು ನೋವು!! ಅದೇ ಬದುಕು!!ಆ ಜೀವನಕ್ಕೇ ನನ್ನದೊಂದ್ನು ಸವಾಲು - "ಹೇ ಬದುಕೇ ತಯ್ಯಾರಾಗಿರು , ನಿನ್ನೆಲ್ಲಾ ಸವಾಲಿಗೂ , ನನ್ನಲ್ಲಿ ಜವಾಬಿದೆ !! ಇನ್ನೆಷ್ಟು ಹೊಸ ಸವಾಲಿವೆ ಹೊರಚೆಲ್ಲು - ನನ್ನ ದೃಢ ನಂಬಿಕೆಯನ್ನು ಕುಗ್ಗಿಸುವ ಶಕ್ತಿ ನಿನಗೆಲ್ಲಿ???!!!!












Comments

  1. Liked the way you described the entrance of our ooru :-)

    ReplyDelete

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020