ಅನಿಸಿಕೆ
ಕಪ್ಪಿಟ್ಟ ಮೋಡ , ತುಂತುರ ಹನಿಗಾನ ಜೊತೆಗೆ ಸುಯ್ಯನೆ ಬೀಸುವ ಗಾಳಿಗೆ ಮರದ ಎಲೆಗಳ ನರ್ತನ, ನಾ ಮುಂದು ತಾ ಮುಂದು ಎನ್ನುವ ವಾಹನಗಳ ದಟ್ಟಣೆ, ಮಳೆ ಜೋರಾಗಿ ಸುರಿಯುವ ಎಲ್ಲ ಮುನ್ಸೂಚನೆ!! ಕಾರ್ ನಲ್ಲಿ ನಾನು ಹಾಗೂ ನನ್ನ ಕಾಲೇಜ್ ನ ಸ್ನೇಹಿತ !! ಎಲ್ಲಿಗೂ ಹೋಗಲಾರದಂತಹ ಟ್ರಾಫಿಕ್ , ಸ್ಸ್ಟೀರಿಯೋ ಸೆಟ್ ನಲ್ಲಿ ಮಧುರವಾದ ಲತಾ ಮಂಗೇಶ್ಕರ್ ಹಾಡು. ಮದ್ಯಾಹ್ನ ಮೂರು ಗಂಟೆಯಾದರೂ ಆಫೀಸ್ ಹೋಗಿ ಮಾಡೋದಾದರೂ ಏನು ಎಂಬ ಅಸಡ್ಡೆ.. ಊಟ ಮುಗಿಸಿ , ಮೊಸರನ್ನ ತನ್ನ ಕಾರ್ಯ ಶುರು ಮಾಡುವ ವೇಳೆ , ಇಬ್ಬರಿಗೂ ಆಕಳಿಕೆ!!! ಮಾತು ಕಾಲೇಜ್ ಸಹಪಾಟಿ ಗಳಿಂದ ಶುರುವಾಗಿ , ಲೆಕ್ಚರರ್ ಗಳ ಬಗ್ಗೆ ಟೀಕೆ ಮುಂದುವರೆಸುತ್ತಾ ಪ್ರಸ್ತುತ ಕೆಲಸದವರೆಗೆ ಮುಂದುವರೆದಿತ್ತು..
ಹೀಗೆ ಮಾತು ಮುಂದುವರೆಸುತ್ತಾ "ನಾನು ನನ್ನ ಕುಟುಂಬ ಹಾಗು ಸ್ನೇಹಿತನ ಕುಟುಂಬ ಸಿಂಗಾಪುರ್ ಹಾಗೂ ಮಲೇಷ್ಯಾ ಟ್ರಿಪ್ ಹೋಗ್ತಾ ಇದ್ದೀವಿ, ಟಿಕೆಟ್ ಬುಕ್ ಮಾಡಿಸಿದೆ, ಒಂದು ವಾರಕ್ಕೆ ಹೋಗ್ತಾ ಇದ್ದೀವಿ.. ತಲೆಗೆ ಒಂದು ಲಕ್ಷ ಎಂದ" . ಒಂದು ಗಳಿಗೆಗೆ ಏನು ಹೇಳಲು ತೋಚಲಿಲ್ಲ.. ಹಾಗೆ ನಕ್ಕು "ವೆರಿ ಗುಡ್" ಎಂದು ಉದ್ಗರಿಸಿದೆ. ನನ್ನ ತಲೆಯೊಳಗೆ ತಿಳಿಯದೆ ಈ ಲಕ್ಷದ ಹುಳ ಗುಣಾಕಾರದಲ್ಲಿ ತೊಡಗಿತ್ತು !! ಮಗು , ಗಂಡ ಹೆಂಡತಿ ಗೆ ಏನಿಲ್ಲವೆಂದರೂ ಮೂರು ಲಕ್ಷ !! ಅದು ಬರಿ ಹೋಗಿ ಬರೋ ಖರ್ಚು ಹಾಗು ತಂಗುವುದಕ್ಕೆ !! ಊಟ ತಿಂಡಿಗೆಲ್ಲ ಬೇರೆ ಲೆಕ್ಕ !! ಎಲ್ಲಾ ಪ್ಯಾಕೇಜ್ !! ಬಿಟ್ಟರೆ ನಮ್ಮನ್ನೂ ಪ್ಯಾಕೇಜ್ ಮಾಡಿ ಸೇಲ್ ಮಾಡಿ ಬಿಡುವ ಟೂರಿಸಂ ಏಜನ್ಸಿಗಳು ಹಾಳಾದವು ಮನದಲ್ಲೇ ಗೊಣಗಿದೆ !! ಮಳೆ ಬಿರುಸಾಗಿತ್ತು , ವಾಹನಗಳ ದಟ್ಟಣೆ ಇನ್ನೂ ಜಾಸ್ತಿಯಾದಂತಿತ್ತು !! ಇನ್ನ್ಯಾವುದೋ ಹಾಡು ಕಾರ್ ನಲ್ಲಿ ಬಡಿದುಕೊಳ್ಳುತ್ತಾ ಇತ್ತು , ಅದರ ಜೊತೆ ನನ್ನ ವಿಚಾರಗಳೂ ಸಹ ಗುದ್ದಾಟಕ್ಕೆ ಸನ್ನದ್ದವಾದಂತಿದ್ದವು !! ನನ್ನ ಆಫೀಸ್ ಬಂದಾಗಿತ್ತು, ಕೈ ಬೀಸಿ ಬಾಯ್ ಹೇಳಿ ಕಾರ್ ನಿಂದ ಇಳಿದಿದ್ದೆ , ನನ್ನೊಳಗಿನ ವಿಚಾರಗಳು ಒಂದಾದ ಮೇಲೊಂದರಂತೆ ಏರುತ್ತಿದ್ದವು!!
ಇತ್ತೀಚೆಗಿನ ಫ್ಯಾಷನ್ ಅನ್ನಿಸಬಹುದು , ಅಥವಾ ಹಣ ಖರ್ಚು ಮಾಡಲು ಕಾರಣ ಒಂದು ಬೇಕಿರಬಹುದು , ಅಥವಾ ಇನ್ಯಾರೋ ಹೋಗಿದ್ದಾರೆ ನಾವೇನು ಅವರಿಗಿಂತ ಕಮ್ಮಿ ಎನ್ನುವ ಸುಪ್ತ ಮನಸ್ಸಿನ ಸವಾಲಿದ್ದಿರಬೇಕು ಅಥವಾ ಸೋಶಿಯಲ್ ಮೀಡಿಯಾ ಅಟ್ರಾಕ್ಷನ್ ಗಾದರೂ ನಾನು ಹೋಗಿದ್ದೆ ಅದರ ಸಾಕ್ಷಿ ಇದು ಎಂದು ಪ್ರಪಂಚಕ್ಕೆ ತಿಳಿಸಲು ಫೋಟೋ ತಗುಲಿಹಾಕುವ ಸಂಚು ಇರಬೇಕು ಹೀಗೆ ಅನೇಕ ಕಾರಣಗಳು ನನ್ನೊಳಗೆ ಸುಳಿದವು !! ಮೂರು ಲಕ್ಷ !! ಅದಕ್ಕೂ ಜಾಸ್ತಿಯಾಗಬಹುದು ಹೊರತು ಕಮ್ಮಿ ಎಂತು ಇಲ್ಲವೇ ಇಲ್ಲ !! ರೈತಾಪಿ ಕುಟುಂಬಗಳನ್ನು ಅತಿ ಹತ್ತಿರದಿಂದ ಬಲ್ಲ ಎನಗೆ, ಒಂದು ವರ್ಷದ ಬೆಳೆ ಮಾರಿದರೂ ಆ ಬೆಲೆ ಸಿಗದು ಎಂದು ಅತಿ ಸೂಕ್ಷ್ಮವಾಗಿ ತಿಳಿದಿತ್ತು !! ಇರಲಿ, ಅವರ ದುಡ್ಡು , ಅವರು ಹೇಗಾದರೂ ಖರ್ಚು ಮಾಡಲಿ ! "ದೇಶ ಸುತ್ತಬೇಕು , ಕೋಶ ಓದಬೇಕು" - ಕೆಲವೊಮ್ಮೆ ಹೀಗೂ ಅನ್ನಿಸಿತ್ತು !! ಆದರೆ , ನಮ್ಮ ಊರನ್ನೇ ನೋಡದ, ನಮ್ಮ ಜಾಡನ್ನೇ ಕಂಡುಕೊಳ್ಳದೆ , ಪ್ರಪಂಚ ಪರ್ಯಟನೆ ಮಾಡಿ ಅಲ್ಲಿ ಹಾಗಿದೆ, ಇಲ್ಲಿ ಯಾವಾಗಲೂ ಹೀಗೇನೆ! ಎಂದು ಹೇಳುವುದು ಎಲ್ಲಿಯ ನ್ಯಾಯ? ಪರದೇಶಗಳಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರಿಗೆ ನನ್ನದೇನು ಅಭ್ಯಂತರವಿಲ್ಲ!! ನನಗೆ ಕೆಲವರ ಹುಚ್ಚಾಟ ಅತಿರೇಕಕ್ಕೆ ಹೋದಂತೆ ಅನುಭವವಾಗಿದೆ! ನಾನು ಅಲ್ಲಿಲ್ಲ ಎನ್ನುವ ಕಾರಣ ಖಂಡಿತವಾಗಿಯೂ ಅಲ್ಲ!! ಎಲ್ಲೋ ಅಪರೂಪಕ್ಕೆ ಚಾಟ್ ಮಾಡುವಾಗ ಅವರ ಪ್ರಶ್ನೆಗಳು ಕೆಲವು ಹೇಗಿರುತ್ತವೆ . "ನೀವು ಬೆಂಗಳೂರಲ್ಲಿ , ಆ ಧೂಳಲ್ಲಿ,ಆ ಟ್ರಾಫಿಕ್ ನಲ್ಲಿ ಹೇಗಾದರೂ ಆಫೀಸ್ ಗೆ ಹೋಗ್ತೀರಪ್ಪ!??" - ಹಲೋ!! ಇದೇ ಧೂಳಿನಲ್ಲಿ ನೀವು ಆಡಿ ಬೆಳೆದು ದೊಡ್ದವರಾಗಿದ್ದು ನೆನಪಿರಲಿ, ಇಲ್ಲಿ ಕಳಿಸಿದ್ದ ಪಾಠವೇ ನಿಮ್ಮನ್ನು ಅಲ್ಲಿ ತಲುಪಿಸಿರುವುದು!! ನೀವು ಅಲ್ಲಿ ಒಳ್ಳೆ ಕೆಲಸ ಮಾಡಿ, ಸಾದ್ಯವಾದರೆ ಧನಾತ್ಮಕವಾದ ಚಿಂತನೆಗಳಿಗೆ ಪೂರಕವಾಗಿರುವ ವಿಚಾರಗಳಿಗೆ ಪುಷ್ಟಿಕೊಡಿ , ಆಗಲಿಲ್ಲವಾ? ಬೆಜಾರೇನು ಇಲ್ಲ! ನಮಗೆ ನಿಮ್ಮ ತೊಂದರೆಗಳು ಅರ್ಥವಾಗುತ್ತವೆ. ಮನೆ ಕೆಲಸ ಮಾಡಲು ಆಳು ಕಾಳು ಇಲ್ಲ , ಮಕ್ಕಳನ್ನು ಡೇ ಕೇರ್ ಗೆ ಬಿಟ್ಟು ವಾಪಸ್ ಮನೆಗೆ ಕರತರಬೇಕು, ಮನೆಗೆ ಬಂದು ಆಫೀಸ್ ಕೆಲಸ ಮಾಡಬೇಕು , ಆ ಒತ್ತಡದಲ್ಲೂ ಅಪ್ಪ ಅಮ್ಮರೊಡನೆ ಮಾತನಾಡಬೇಕು , ಇವೆಲ್ಲ ತಾಪತ್ರಯ, ಒತ್ತಡಗಳ ನಿವಾರಿಸಲು ಇಂಡಿಯಾ ದ ಬಗ್ಗೆ ಹಳಿದುಕೊಳ್ಳುವುದ ನಿಲ್ಲಿಸಿ ! ನೀವು ಒಳಗೊಳಗೆ ನಮ್ಮ ಜನವನ್ನು , ಜನರ ಒಡನಾಟವನ್ನು ಕಳೆದುಕೊಳ್ಳುತ್ತಿರುವ ದುಃಖ ಹಾಗು ಅವರೊಡನಿರುವ ಸಂಬಂಧಗಳಿಗಾಗಿ ಪರಿತಪಿಸುವುದು ನಮಗೆ ನೀವು ತಿಳಿಸದಿದ್ದರೂ, ನಮಗೆ ನಿಮ್ಮ ಮೊರೆ ತಿಳಿಯುತ್ತಿದೆ!! ಅರೆ!! ವಿಷಯ ಎಲ್ಲಿಂದ ಎಲ್ಲಿಗೋ ಬಂತು !! ಇದು ಬರಿ ಉದಾಹರಣೆಯಷ್ಟೇ !! ಇದರ ಬಗ್ಗೆ ಮೊಗೆದಷ್ಟು ಜಾಸ್ತಿ ವಿಷಯಗಳಿವೆ , ಅವುಗಳ ವಿಚಾರ ಮತ್ತೊಮ್ಮೆಗಿರಲಿ !
ನಮ್ಮ ಊರಿನಲ್ಲೇ ನಾವು ನೋಡಿರದ , ಇತಿಹಾಸದಿಂದ ಮುಕ್ತಿ ಪಡೆದಿರುವ ದೇವಾಲಯಗಳು, ಅವುಗಳ ಹಿಂದಿನ ಪುರಾಣ ಗಳಿವೆ!! ನಮ್ಮ ಜಿಲ್ಲೆಯಲ್ಲೇ ನೂರಾರು ನೋಡಬೇಕಾದ ಜಾಗಗಳಿವೆ!! ಒಂದು ಪಟ್ಟಿ ಮಾಡಿ , ಅವನ್ನು ನೋಡಲು ಪ್ರಯತ್ನ ಪಟ್ಟಿದ್ದೀರಾ? ಬೇರೆ ದೇಶಗಳಿಗೆ ಹೋಗಲು ಆರು ತಿಂಗಳು ಹಿಂದೆಯೇ ಅಲ್ಲಿನ ಹವಾಮಾನ , ಶಾಪಿಂಗ್ ಮಾಡಬಹುದಾದ ಐಟಂ ಗಳು , ನೋಡಬೇಕಾದ ಸ್ತಳಗಳನ್ನು ಪಟ್ಟಿಮಾಡಿ , ಕಡಿಮೆ ಖರ್ಚಿನ ವಿಮಾನಗಳು ಹಾಗು ಕಂಡರಿಯದ ಆಫರ್ ಗಳಿಗಾಲಿ ಗೂಗಲ್ಲ್ ನಲ್ಲೂ ಜಾಲಾಡುವ ನಾವು , ನಮ್ಮ ಊರು, ಜಿಲ್ಲೆ , ರಾಜ್ಯ ಗಳ ಇತಿಹಾಸಿಕ ಸ್ಥಳಗಳು ಹಾಗು ನಿಸರ್ಗವನ್ನು ಆಸ್ವಾದಿಸುವ ಇಂದ್ರಿಯಗಳನ್ನು ಕಳೆದುಕೊಂಡು ಯಾವುದೋ ಮಂಕು ಬೂದಿ ಬಿದ್ದವರಂತೆ ಆಡುವುದು ಸರಿಯೇ? ದೂರದ ಬೆಟ್ಟ ನೋಡಲು ನುಣ್ಣಗೆ !! ಎಲ್ಲೋ ಹೊರದೇಶಕ್ಕೆ ಹೋಗಿ ಅಲ್ಲಿನ ಜಾಗಗಳನ್ನು ನೋಡಿರದ ಹಲವರ ಮುಂದೆ ಬಡಾಯಿ ಕೊಚ್ಚಿ ಕೊಳ್ಳುವ ಮುಂಚೆ, ನಮ್ಮ ಸುತ್ತಲಿನ ನೋಡಿರುವ ಸ್ಥಳಗಳನ್ನು ಗೊತ್ತಿರುವವರ ಮುಂದೆ ಚರ್ಚಿಸಿ , ನಿಮ್ಮ ಜ್ಞಾನ ವೃದ್ದಿ ಯಾಗುವುದರಲ್ಲಿ ಸಂಶಯವಿಲ್ಲ !! ಹೌದು! ಹಣ ನಿಮ್ಮದು , ಖರ್ಚು ನಿಮ್ಮದು.. ಜಾಗ ನಮ್ಮದಾಗಿರಬಾರದೇಕೆ? ಹೋಗಿ ! ಹೊರದೇಶಕ್ಕೆ ಪ್ರವಾಸಕ್ಕಾಗಿ ಹೋಗುವುದು ತಲೆ ತರಬೇಕಾದ ಸಂಗತಿ ಏನಲ್ಲ! ಅವರ ಬೊಕ್ಕಸ ಅರ್ಧ ನಮ್ಮಂತವರಿಂದಲೇ ತುಂಬುವುದು!! ನಮ್ಮ ದೇಶದ ವಿಸ್ಮಯಗಳನ್ನು ತಿಳಿಯದೇ , ಬೇರೆ ದೇಶಗಳ ಸೌಂದರ್ಯ ಹೊಗಳಿ ಏನು ಲಾಭ? ಸನಾತಿ ಕಾಲದಿಂದಲೂ ಚಾಲ್ತಿಯಲ್ಲಿರುವ ಕಥೆ - ಗಣೇಶ ಹಾಗು ಸುಬ್ರಮಣ್ಯ ರಿಗೆ ನಾರದ ಒಂದು ಸ್ಪರ್ದೆ ಏರ್ಪಡಿಸಿದನಂತೆ. ಇಬ್ಬರೊಳೊಗೆ ಮೊದಲಿಗರಾರು ಎಂದು ತಿಳಿಯಲು ಒಂದು ಸವಾಲಿಟ್ಟನಂತೆ . ಪ್ರಪಚವನ್ನು ಮೂರು ಬಾರಿ ಯಾರು ಸುತ್ತಿ ಮೊದಲು ಬರುತ್ತಾರೋ ಅವರೇ ವಿಜಶಾಲಿಗಳಾಗುತ್ತಾರೆ ಎಂದನಂತೆ!! ಗಣೇಶನ ಮೂಷಿಕ ಚಿಂತೆಗೊಳಗಾಗಿತ್ತು!! ಸುಬ್ರಮಣ್ಯ ಆತನ ವಾಹನವಾದ ನವಿಲಿನೊಂದಿಗೆ ವಿಜಯಿ ನಾನೇ ಎಂದು ಬೀಗುತ್ತಾ ಸ್ಪರ್ದೆ ಗೆ ಸನ್ನದ್ದನಾಗಿದ್ದ !! ಸ್ಪರ್ದೆ ಶುರುವಾಗಿತ್ತು !! ಗಣೇಶ ಅಲ್ಲೇ ನಿಂತಿದ್ದ , ಸುಬ್ರಮಣ್ಯ ಕೋಲ್ಮಿಂಚಿನಂತೆ ಮಾಯವಾಗಿದ್ದ !! ಕೊನೆಗೆ ವಿಜಯಿ ಗಣೇಶನಾಗಿದ್ದ !! ಕಾರಣ ಆತನು ಅವನ ಪ್ರಪಂಚವಾದ ಅಪ್ಪ ಅಮ್ಮನನ್ನು ಮೂರು ಭಾರಿ ಸುತ್ತಿದ್ದ !!ಸುಬ್ರಮಣ್ಯ ವಸ್ತು ಪ್ರಪಂಚವನ್ನು ಗೆಲ್ಲಲು ಇನ್ನೂ ಸುತ್ತುತ್ತಿದ್ದ !!! ನಮ್ಮ ಪ್ರಪಂಚ ಯಾವುದೆಂದು ನಮಗೆ ಅರಿವಾದರೆ ಯಾವ ವಸ್ತು ಪ್ರಪಂಚದಿಂದ ಏನು ಲಾಭ ! ಹಾಗಂತ ಬಾವಿಯೊಳಗಿನ ಕಪ್ಪೆಯಂತಿರು ಎಂಬ ಅನಿಸಿಕೆ ನನ್ನದಲ್ಲ!!
Comments
Post a Comment