ನೀ ಮಾಯೆಯೊಳಗೋ! ಮಾಯೆ ನಿನ್ನೊಳಗೋ!!

ಈ ಬೃಹತ್  ಪ್ರಪಂಚದಲ್ಲಿ 'ನಾನು' ಎಂಬುದು ತೃಣ ಸಮಾನ ! ಹಾಗಿದ್ದರೂ ಜನ ನನ್ನತನವನ್ನು ಎತ್ತಿ ಹಿಡಿಯುವುದು ವ್ಯಂಗ್ಯವೆನಿಸುತ್ತದೆ. ವಿಸ್ತಾರವಾದ ಆಲೋಚನೆಗಳಿಲ್ಲದೆ , ಸಣ್ಣತನಗಳಿಂದ ಜನರನ್ನು ಅಳೆಯುವ 'ನಾನು' ಎಂಬುವ ಅಹಂಭಾವ ಇತ್ತೀಚಿಗೆ ತುಂಬಾ ಎನಿಸುವಷ್ಟು ಜನಗಳಲ್ಲಿ ಕಾಣುತ್ತಿದೆ! ಹಣತೆ ಆರುವ ಮುನ್ನ ಜೋರಾಗಿ ಉರಿಯುತ್ತದೆ ಎನ್ನುವ ಹಾಗೆ , ಒಳ ಮನಸಿನ ಅಳಿವಿನ ಸಮಯದಲ್ಲಿ ಈ ರೀತಿಯಾದ ನನ್ನತನ ಜಾಸ್ತಿಯಗಬಹುದೇನೋ ??!! ಎಲ್ಲದರಲ್ಲೂ ಹುಳುಕು ಹುಡುಕುವ ನನ್ನತನವನ್ನು  ಮೊದಲ ಹಂತದಲ್ಲೇ ಚಿವುಟಲಿಲ್ಲವೆಂದರೆ ಹೆಮ್ಮರವಾಗುವುದು ಖಂಡಿತ !!! ನಾನೆಂಬ ಮಾಯೆ ಅರಸಿ ಬಂದಾಗ ಅದನ್ನು ಹಿಮ್ಮೆಟ್ಟಿ ನಿಂತರೆ ಬದುಕು ಹಸನಾಗುವುದು. ಆದರೆ, ಆ ಮಾಯೆ ಒಳ  ಹೊಕ್ಕಾಗ ಅಹಂ ವ್ಯಾಪಿಸುವುದು ಸಹಜ!

ಮದುವೆಗೆ ಮುನ್ನ ಹುಡುಗ ತನ್ನ ಹುಡಗಿ ಹೇಗಿರಬೇಕೆಂದು ಮನಸ್ಸಿನಲ್ಲೇ ಚಿತ್ರ ಬಿಡಿಸಿ ಅವಳಿಗಾಗಿ ಮನಸ್ಸಲ್ಲಿ ಒಂದು ಗೂಡು ಕಟ್ಟಿ , ಅವಳಿಗಾಗಿ ಕಾದು ಆ ಮಾಯೆಗಾಗಿ ಹುಡುಕಾಡುವುದು ಸಹಜ! ಅಂತರಂಗದಲ್ಲಿ ಚಿತ್ರಿಸಿದ ಆಕೆಯ ಮುಖಚರ್ಯೆಗಾಗಿ ವರ್ಷಾನುಗಟ್ಟಲೆ ಹುಡುಕಿ , ತಡಕಾಡಿ  ಕೊನೆಗೆ ಸಿಕ್ಕರೆ ಮನಸ್ಸೊಳಗೆ ಖುಷಿ ಅಪಾರ. ನಂತರ ಆ ಮಾಯೆಗೆ ಬಲಿಯಾಗಿ ತನ್ನವರ ಮರೆತರೆ ತ್ರಿಶಂಕು ಸ್ವರ್ಗ ! ತಾನಾಗೆ ಹುಡುಕಿದ ಮಾಯೆ , ತನ್ನೊಳು ಹೊಕ್ಕಿ ತನ್ನತನಕ್ಕಾಗಿ  ಅಣು ಅಣುವಾಗಿ ಕೊಲ್ಲುವಾಗ  ಆಗುವ ವೇದನೆ ಮನುಷ್ಯನ ಜಾಡ್ಯವನ್ನೇ ಕುಗ್ಗಿಸುವಂತಹುದು !! ಮನಸ್ಸನ್ನು ಗುಡಿಸಿ ನೆಮ್ಮದಿಯ ರಂಗೋಲಿ ಇಡುವ ಮದಡಿಯೇ ಮುಳುವಾದರೆ , ಸಂತೋಷವೆಂಬ ಅಂಗಳ ರಾಡಿಯಾಗಿ, ನೆನಪೆಂಬ ವಾತಾವರಣ ವಿಷವಾಗುವುದು ಖಂಡಿತ!! ವಿರುದ್ದವೆಂಬಂತೆ, ಮಡದಿ ತನ್ನತನವನ್ನು ಕೊಂದು , ಮನೆಯವರ ಸಂತೋಷದಲ್ಲಿ  ತನ್ನ ಸಂತೋಷ ಪಡೆದರೆ ಮನೆಯನ್ನು ಬೆಳಗುವ ನಂದಾದೀಪದಂತೆ !!!

ಪ್ರತಿಯೊಬ್ಬ ಪ್ರಜೆಯಿಂದ ಪ್ರಾರಂಭವಾಗುವ ಸಮಾಜ, ಪ್ರತಿಯೊಬ್ಬನ ಸಹಕಾರ ದೊರೆತರೆ ಮಾತ್ರ ಅದು ವಾಸಿಸಲು  ಯೋಗ್ಯವಾಗಿ ಉಳಿಯುತ್ತದೆ. ತಾನು ಬೆಳಿಗ್ಗೆ ಸೇದಿ ಬಿಸಾಡಿದ ಸಿಗರೇಟಿನ ಜಾಗದಲ್ಲಿ ಸಂಜೆಯಾಗುವಷ್ಟರಲ್ಲಿ  ಕಸದ ರಾಶಿ ಕಂಡರೆ ಆಶ್ಚರ್ಯವಿಲ್ಲ! ತಾನೇ ಮಾಡಿದ ಕಸದ ರಾಶಿಯನ್ನು ಸ್ವಚ್ಚ ಮಾಡಲು ಬೇರೆಯವರಿಗೆ ಅಹ್ವಾನವೇಕೆ? ಏನಾದರೂ ಕೆಲಸ ಬೇಕಾದಾಗ ಸರಕಾರಿ ಕಛೇರಿಗಳಿಗೆ ಮೇಜಿನಡಿಯಿಂದ ನೋಟು ತಳ್ಳುವ ನಾವು , ಭ್ರಷ್ಟಾಚಾರದ ವಿರುದ್ದ ಸಿಡಿದೇಳುವುದು ಎಷ್ಟು ಸರಿ? ಪ್ರತಿಯೊಬ್ಬರೂ ತಲೆಗೊಂದರಂತೆ ವಾಹನಗಳನ್ನಿಟ್ಟುಕೊಂಡು, ದಾರಿದೀಪವನ್ನು ಗಮನಿಸದೆ ಚಾಲನೆ ಮಾಡಿ ಸಂಚಾರ ದಟ್ಟಣೆಯನ್ನು ದೂಷಿಸುವುದು ಯಾವ ನ್ಯಾಯ? ಬೇರೆಡೆಯಿಂದ ಕೆಲಸಕ್ಕಾಗಿ ಬೇರೆ ನಗರಕ್ಕೆ ಬಂದು, ಅನ್ನ ತಿನ್ನಲು ಸಹಾಯಮಾಡುವ ನಗರಕ್ಕೇ ಹಳಿದರೆ ಏನು ಬೆಲೆ?

ಸಮಾಜದ ಪ್ರತಿನಿತ್ಯದ ಹೋರಾಟದಲ್ಲಿ ಅವರಿವರ ಬಗ್ಗೆ ಯೋಚನೆ ಮಾಡಲೂ ಸಮಯವಿಲ್ಲದಿರುವಾಗ, ಮುಖ ಕೊಟ್ಟು ಮಾತನಾಡದಿರುವ ನೆಂಟರ ಸಾಧನೆಗೆ ಕರುಬುವುದೇಕೆ? ಮನೆಯಲ್ಲೇ ಕೊಳೆಯುವಷ್ಟು  ಐಶ್ವರ್ಯವಿದ್ದರೂ, ಪಕ್ಕದ ಮನೆಯವರು ಹಬ್ಬಕ್ಕೆಂದು ಚಿನ್ನದ ಆಭರಣ ಕೊಂಡರೆಂದು ಗೊತ್ತಾದರೆ , ಆ ತುಮುಲವೇಕೆ? ತಮಗೆ ಸ್ವಂತ ಮನೆ ಇದ್ದು , ಆಗದಿರುವವರು ಮನೆ ಕೊಂಡರೆ ಮೂಗು ಮುರಿಯುವುದೇಕೆ? ಇರುವುರದರಲ್ಲೇ ತೃಪ್ತಿ ಪಡೆಯುವುದರ ಬದಲು, ಇಲ್ಲದಿರುವುದರ ಚಿಂತೆ ಏಕೆ? ಪಡೆದಿರುವ ಈ  ಮನುಷ್ಯ ಜನ್ಮವ ಸಂತೋಷದಿಂದ ಕಳೆಯುವ ಬದಲು , ಯಾವಾಗಲೂ ಅಸಡ್ಡೆ ಅಸೂಯೆಯೇಕೆ? ಯಾವ ಮಾಯೆಯಲ್ಲಿ ಇನ್ನು ಬದುಕಿದ್ದೇವೆ ?? ಅಥವಾ ಈ ಎಲ್ಲಾ ಮಾಯೆಗಳು ನಮ್ಮೊಳಗೇ ನಮಗೇ ಗೊತ್ತಿಲ್ಲದೇ ಬುದುಕಿವೆಯೇ ? ಅವೇನಾದರೂ ಇನ್ನು ನಮ್ಮೊಳಗೆ ಉಸಿರಾಡುತ್ತಿದ್ದರೆ, ಅವನ್ನು ಮೆಟ್ಟಿ ಮುಂಬರಲು ಸಂಕೋಚವೇಕೆ???


Comments

  1. Very nice akka !! Its always a rebirth for a girl when she becomes mother :) Time passes like a river and for siri its already 1 Year..Happy B'day siri putta :) <3

    ReplyDelete

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020