ಮಲೆನಾಡ ಮಳೆಗಾಲ- ಅಳಿಯದೆ ಉಳಿದಿದೆ ಮನದಾಳ!!

ಇನ್ನೇನು ಆಫೀಸ್ ಇಂದ ಮನೆಗೆ ಹೊರಡೋ ಸಮಯ.  ಹಾಳು ಮೂಳು ಕೆಲಸಗಳಿಗೆ ಫುಲ್ ಸ್ಟಾಪ್ ಹಾಕಿ ನನ್ನ laptop ನ ಅದರ ಚೀಲಕ್ಕೆ ತುಂಬಿ , ಅದನ್ನು ಹೆಗಲಿಗೇರಿಸಿ ಆಫೀಸ್ ಬಾಗಿಲಿಂದ ಹೊರಗೆ ಬರುವಷ್ಟರಲ್ಲಿ  ಮೂಗಿನ ಮೇಲೊಂದು ಹನಿ 'ಟಪ್ '! ಅಂತ ಬಿತ್ತು.  ಅಯ್ಯೋ! ದೇವರೇ, ಮನೆಗೆ ಹೇಗಪ್ಪಾ ಹೋಗೋದು ಅಂತ ಬೇಗ ಬೇಗ ಬಸ್ ಸ್ಟಾಂಡ್ ಕಡೆಗೆ ಹೆಜ್ಜೆ ಹಾಕಿದೆ.ಒಂದೊಂದೇ ಹನಿ ತಲೆ ಮೇಲೆ  ಬಿದ್ದ ಹಾಗೆ, ನೆನಪುಗಳು ಒಂದೊಂದಾಗಿ ಬಿಚ್ಚಿ ಗರಿಗೆದರಿದವು.

ಇನ್ನೇನು ಬೇಸಿಗೆ ರಜೆ ಮುಗಿದು ಜೂನ್ ಬಂದೇ ಬಿಡ್ತು! ಶಾಲೆಗೆ  ಹೋಗ್ಬೇಕು ಅಂತ ನಮಗೆ ಅನ್ನಸಿದರೆ , ಅಬ್ಬಾ ಅಂತು ಇಂತು ರಜೆ ಮುಗಿತಲ್ಲಾ ಅನ್ನೋ ನೆಮ್ಮದಿಯ ನಿಟ್ಟುಸಿರು ಅಮ್ಮ ಅಪ್ಪಂಗೆ . ಶಾಲೆ ಗೆ ಹೊರಡೋ ದಿನಕ್ಕೆ ಸರಿಯಾಗಿ ಮಳೆ ಶುರು ಆಗೋದರಿಂದ ಮತ್ತೆ ಹೇಗಿದ್ರೂ ಮಳೆ ಜಾಸ್ತಿ ಆದ್ರೆ ರಜೆ ಸಿಕ್ಕೆ ಸಿಗುತ್ತೆ ಅನ್ನೋ ಖುಷಿ ಒಳಗೊಳಗೆ. ಎಲ್ಲೆಲ್ಲೊ ಹರಡಿದ್ದ ಬುಕ್ ಗಳನ್ನು ಬ್ಯಾಗ್ ಗೆ ಸೇರಿಸಿ ಹೊರಡೋ ಸಡಗರ. ನಮ್ಮ ಪಾದರಕ್ಷೆಗಳಿಗು ರಜೆಯಿಂದ ಮುಕ್ತಿ . ಕೈ ಯಲ್ಲಿ ಕೊಡೆಯಿದ್ರು ಬಿಚ್ಚದೆ, ಪಕ್ಕದ ಮನೆಯವರ ಗೊಪ್ಪೆಯೊಳಗೆ ಸೇರಿ ಶಾಲೆ ಸೇರಿದ್ದು ಇದೆ. ಹೋಗೋ ದಾರಿಯಲ್ಲಿ ಒಬ್ಬೊಬ್ಬರಾಗಿ ಕೂಡಿಕೊಳ್ಳುವ ಮಕ್ಕಳು . ಜನ ಹೆಚ್ಚಾದಂತೆ , ಹೋಗೋ ದಾರಿಯಲ್ಲಿ ಆಟಗಳೂ ಹೆಚ್ಚೇ ! ಒಬ್ಬ ಮಳೆ ನೀರಲ್ಲಿ ನೆಂದರೆ ಇನ್ನೊಬ್ಬ ಅವನಿಗಿಂತ ನಾನೇನು ಕಮ್ಮಿ ಇಲ್ಲ ಅನ್ನೋ ಹಾಗೆ ನೆನೆಯೊದು. ಹೋಗೋ ದಾರಿಯಲ್ಲಿ ಟೀಚರ್ ಸಿಕ್ರೆ ತುಂಬಾ ಒಳ್ಳೆ ಮಕ್ಳ ಹಾಗೆ ಸಾಲಲ್ಲಿ ಹೋಗೋದು,  ಇವಕ್ಕೇನು ಕಡಿಮೆ ಇರ್ಲಿಲ್ಲ.

ಬೇಗ ಬೇಗ ಹತ್ತಿ  ಟಿಕೆಟ್ ಟಿಕೆಟ್ ಅಂತ ಕಂಡಕ್ಟರ್ ಚೀರಿದಾಗ  ಮತ್ತೆ ಇಹ ಲೋಕಕ್ಕೆ ಬಂದ ಅನುಭವ. ಈ ವೋಲ್ವೋ ಬಸ್ ನಲ್ಲೂ ಇಂತಾ ರಶ್ ! ನಂಗೆ ನಿಲ್ಲಕೆ ಜಾಗ ಇಲ್ಲ ನನ್ನ ಬ್ಯಾಗ್ ಗೆ ಏನ್ ಮಾಡೋದು? ಡ್ರೈವರ್ ಕೂತಿರೋ ಡಬ್ಬಿಯೊಳಗೆ ಸಲ್ಪ ಜಾಗ ಖಾಲಿ ಇರೋದ್ರಿಂದ, ಬ್ಯಾಗ್ ನ ಆ ಜಾಗಕ್ಕೆ ತೂರಿಸಿ ಹಾಗೆ ಮುಂದೆ ಗ್ಲಾಸ್ ನಿಂದ ಮಳೆ ನೋಡ್ತಾ ನಿಂತೆ. ಬಸ್ ಅಲ್ಲಿ ಗಾಜು ಒರಸಲಿಕ್ಕೆ ವೈಪರ್ ಬ್ಲೇಡ್ ಅಲುಗಾಡುತ್ತಿರುವಂತೆ ಮನಸು ಮತ್ತೆ ನನ್ನ ಮಲೆನಾಡ ಮಳೆಗಾಳಕ್ಕೆ ಕರೆದೊಯ್ಯಿತು.

ಶಾಲೆ ಮುಗಿಸಿ ಮನೆ ಕಡೆಗೆ ಬರುವಾಗ ಯಾವುದಕ್ಕೂ ಲೆಕ್ಕ ಇಲ್ಲ. ಎಷ್ಟು ಸಾರಿ ನೆನೆಯೋದು , ಎಷ್ಟು ಸಾರಿ  ಜಾರಿ ಬೀಳೋದು , ಎಷ್ಟು ಸಾರಿ ಜಗಳ ಆಡೋದು. ಯಾರು ಹವಾಯಿ ಚಪ್ಪಲ್  ಹಾಕಿರ್ತಾರರೋ ಅವರ ಬಟ್ಟೆ ಹಿಂದೆ  ರಂಗೋಲಿ ಚುಕ್ಕಿ ಬಿದ್ದಿರೋದು ಖಂಡಿತ. ದಾರಿ ಅತ್ತ ಇತ್ತ ತೋಟ ಇರೋದ್ರಿಂದ, ಮಳೆಗಾಲದ ಗಾಳಿಗೆ ಬಿದ್ದಿರೋ ಕಿತ್ತಳೆ ಮತ್ತೆ ಮಾವಿನಹಣ್ಣು ಹೆಕ್ಕಲು ತೋಟ ನುಗ್ಗೋದು. ಸಲ್ಪ ಮಣ್ಣಾಗಿದ್ರೆ ಅಲ್ಲೇ ಹರಿತಿರುವ ತೋಡ ಲ್ಲಿ  ತೊಳೆದು ಹಂಚಿ ತಿನ್ನೋ ಮಜನೇ  ಬೇರೆ . ಹೇಗೊ ಮನೆ ಸೇರಿದರೆ, ಬಚ್ಚಲಲ್ಲಿರೊ ಬಿಸಿ ನೀರು ನಮಗಾಗಿ ಕಾದಿರುತಿತ್ತು . ಕೈ ಕಾಲು ತೊಳೆದು , ಒಂದು ಕಡೆಗೆ ಬ್ಯಾಗ್ ಬಿಸಾಡಿ  ಡ್ರೆಸ್ ಬದಲಾಯಿಸಿ ಮತ್ತೆ ಆಟಕ್ಕೆ ಸಿದ್ದ.  ದನದ ಕೊಟ್ಟಿಗೆಯಲ್ಲಿ ಹಾಕಿರೋ ಬೆಂಕಿಗೆ ಹಲಸಿನ ಬೀಜ ಹಾಕಿ ನೆನದಿರೋ ಬಟ್ಟೆನ ಒಣಗಿಸಿ ಹಲಸಿನ ಬೀಜ ತಿಂತಾ ಕೂರೋದು ಹಾಗೇ ಬೆಂಕಿ ಕಾಯಿಸಿಕೊಳ್ಳೊದು ಎಷ್ಟು ಹಿತ.

ಯಾರಲ್ಲಿ ಇಳಿಯೋರು ?? ಬೇಗ ಬೇಗ ಇಳೀರಿ, ಸಿಗ್ನಲ್ ಬಿತ್ತು! ಅಂತ  ಶಬ್ದ ಬಂದ ಹಾಗೆ ಬಸ್ ಇಳ್ದು ನೋಡಿದ್ರೆ ಬರಿ  ಬಿಸಿಲು!!
ಮಳೆಯ ಸುಳಿವೇ  ಇಲ್ಲ. ಹಾಳಾದ ಬೆಂಗಳೂರು, ಒಂದು ಕಡೆ ಮಳೆ ಬಂದ್ರೆ ಒಂದು ಕಡೆ ಇಲ್ಲ, ಆದರೆ ಮಳೆ ಬರದಿರೋದು ಒಳ್ಳೇದೆ ಆಯಿತು. ಬೇಗ ಮನೆಗೆ ಸೇರಬಹುದು ಅಂತ ಮನಸಲ್ಲೇ ಲೆಕ್ಕ ಹಾಕಿ ಹೆಜ್ಜೆ ಹಾಕ್ತ ಇದ್ದರೆ , ಮಳೆ ನಿಂತಾಗ ಊರಲ್ಲಿ ಆಡುವ ಕುಂಟ ಪಿಲ್ಲೆ ಆಟ ನೆನಪಾಗ್ತಾ ಹೋಯ್ತು . ಜಾರಿ ಬಿದ್ದು ಅಳೋದು, ಮೋಸ ಮಾಡಿ ಗೆಲ್ಲೋದು , ಆಟದ ಮದ್ಯ ಮಳೆ ಬಂದರೆ ಮತ್ತೆ ಮಳೆ ನಿಲ್ಲೋವರೆಗೂ ಕಾದು ಆಟ ಮುಂದುವರೆಸೋದು. ಆಟ ಮುಗಿದರೆ ಅಡಿಗೆ ಮನೆಗೆ ಹೋಗಿ ಹಲಸಿನ ಹಪ್ಪಳ  ಸುಟ್ಟು  ತಿನ್ನೋದು!! ಮಲಗೋ ಮುನ್ನ ಏನಾದ್ರೂ ಸ್ಲೇಟು ಮೇಲೆ ಗೀಚಿ ಹೋಂ ವರ್ಕ್ ಮುಗಿಸೋದು. ಅಷ್ಟು ಆದ್ರೆ ದಿನ ಮುಗಿತು. ಬೆಳಿಗ್ಗೆ ಎದ್ದ ಕೂಡಲೇ ರೇಡಿಯೋ ಕೆಳೊದು. ನ್ಯೂಸ್ ಗೋಸ್ಕರ ಅಂತು ಖಂಡಿತ ಅಲ್ಲ. ಮಳೆ ಜಾಸ್ತಿ ಆಗಿ ರಜೆ ಕೊಟ್ಟಿದಾರ ಅಂತ ತಿಳಿಲಿಕ್ಕೆ.

ಹಾಗೆ ನಡೀತಾ ನಡೀತಾ ಮನೆ ಸೆರಿದೆ. ನನ್ನ ಫ್ಲಾಟ್ ಗೆ ಮೆಟ್ಟಿಲು ಏರುತ್ತಾ  ಈಗಿನ ಕಾಲದ ಮಕ್ಕಳ ಬಗ್ಗೆ ನೆನೆದು ಕನಿಕರ ಬಂತು. ಯಾವ ಕಾಲವೇ ಆಗಲಿ ಬೆಳಿಗ್ಗೆ ಎದ್ದು ಶಿಸ್ತಾಗಿ ಸ್ಕೂಲ್ ಗೆ ಹೋಗಿ  ಸಂಜೆ ಮನೆಗೆ ಬಂದು ಹೋಂ ವರ್ಕ್ ಮಾಡಿದ್ರೆ ದಿನಚರಿ ಮುಗಿತು. ಆಟ ಆಡಲಿಕ್ಕೆ ಜಾಗ ಇಲ್ಲ, ಇನ್ನು ಮಳೆಯಲ್ಲಿ ನೆನೆಯೋದು ಬೇರೆ ಮಾತು. ಮಳೆ ಹೇಗೆ ಬರುತ್ತೋ ಪುಟ್ಟ ಅಂತ ಪಕ್ಕದ ಮನೆ ಮಗುನ ಕೇಳಿದ್ರೆ , ಗಾಡ್ ಒಂದು ಬಿಗ್ ಶವರ್ ಇಟ್ಕೊಂಡಿದಾರೆ ಅದನ್ನ ಆನ್ ಮಾಡ್ತಾರೆ ಅಂತ ಅರ್ಧಂಬರ್ದ ಕನ್ನಡ ಮಾತಾಡಿ  ಓಡಿ  ಹೋದ. ಹೇಗೋ ಸಲ್ಪ ಆಟ ಆಡಲಿ ಅಂತ ಮಾಲ್ ಗಳಿಗೆ  ಕರೆದುಕೊಂಡು ಹೋಗುವ ಎಂದು ವೀಕೆಂಡ್ ಗಾಗಿ  ಕಾದಿರುವ  ಪೋಷಕರು. ಎಲ್ಲ ಭಾವನೆಗಳು ವೀಕೆಂಡ್ ಗಾಗಿ ಕಾಡು ಕೂತಂತೆ ಭಾಸವಾಗುತ್ತದೆ.

ಹೇಗೋ ಮನೆ  ತಲಪಿದ ನಿರಾಳ ಭಾವ. ಇವತ್ತಿನ ಒಂದು ಗಂಟೆ ಸಮಯದಲ್ಲಿ ನನ್ನೂರಿಗೆ ಹೋಗಿ ಬಂದ ಅನುಭವ!!! ಸಮಯ ಮರುಕಳಿಸಿ ಬರುವಂತ್ತಿದ್ದರೆ !!!!


Comments

Post a Comment

Popular posts from this blog

Unlock The Wardrobe!!

Corona Lockdown - Day 37 - 30th April 2020

Corona Lockdown - Day 35 - 28th April 2020